ಶನಿವಾರ, ಸೆಪ್ಟೆಂಬರ್ 28, 2013

ಲೂಸಿಯಾ.. “ನೀ ಮಾಯೆಯೊಳಗೋ ಮಾಯೆ ನಿನ್ನೊಳಗೋ"

ಮೊದಲಿನಿಂದ ನನಗೆ ಒಂದು ಕುತೂಹಲ ಇತ್ತು, ಯಾಕೆ ಪವನ್ ಈ ಚಿತ್ರಕ್ಕೆ ಲೂಸಿಯಾ ಎಂದು ಹೆಸರು ಇಟ್ಟಿದ್ದಾರೆ ಅಂತ, ನನ್ನ ಸ್ನೇಹಿತರು ಸಹ ನನಗೆ ಈ ಪ್ರಶ್ನೆ ಕೇಳುತ್ತಾ ಇದ್ದರು. ಆದ್ರೆ ಚಿತ್ರ ನೋಡಿದ ಮೇಲೆ ಈ ಚಿತ್ರಕ್ಕೆ ಈ ಹೆಸರೇ ಸರಿಯಾಗಿದೆ ಎನಿಸುತ್ತದೆ. ಏಕೆ ಎಂದರೆ ಲೂಸಿಯಾ ಎಂದರೆ ಬೆಳಕು ಎಂದು ಅರ್ಥ ಮತ್ತು ಚಿತ್ರದ ಹೀರೋ ಚಿತ್ರಮಂದಿರದಲ್ಲಿ ಬ್ಯಾಟರಿ ಬಿಡುವ ಹುಡುಗ (ಕತ್ತಲೆಯಲ್ಲಿ ಇರುವವರಿಗೆ ಬೆಳುಕು ಬಿಟ್ಟು ದಾರಿ ತೋರಿಸುವವನು).
ಕನ್ನಡದಲ್ಲಿ ಪ್ರಥಮ ಬಾರಿಗೆ ವೀಕ್ಷಕರೆ ದುಡ್ಡು ಹಾಕಿ ತೆಗೆದಿರುವ ಚಿತ್ರ. ೧೩೦೦ ವೀಕ್ಷಕರು ಈ ಸಿನಿಮಾದಲ್ಲಿ ಹಣ ಹಾಕಿದ್ದಾರೆ (ಅದರಲ್ಲಿ ನಾನು ಒಬ್ಬ). ಪವನ್ ಕುಮಾರ್ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಲೂಸಿಯಾ' ಚಿತ್ರ ಬಿಡುಗಡೆಗೂ ಮುನ್ನವೇ ಸಮಾಜಿಕ ಜಾಲತಾಣಗಳಲ್ಲಿ ಹಿಟ್ ಆಗಿತ್ತು. ಎಲ್ಲರ ಮನದಲ್ಲಿ ಈ ಚಿತ್ರ ಕುತೂಹಲ ಹುಟ್ಟಿಸಿತ್ತು. ಎಲ್ಲರು ಈ ಚಿತ್ರದ ಬಿಡುಗಡೆಗೆ ಕಾಯುವಂತೆ ಮಾಡಿತ್ತು.


ಆಸ್ಪತ್ರೆ ಯಲ್ಲಿ ಯಂತ್ರಗಳ ಸಹಾಯದಿಂದ ಜೀವಂತವಾಗಿ ಇಡಲಾಗಿರುವ ವ್ಯಕ್ತಿ. ಅವನ ಸ್ಥಿತಿಗೆ ಕಾರಣ ಎನು ಅಂತ ಹುಡುಕಲು ಹೊರಟ ಪೋಲಿಸರು. ಆ ನಂತರ ಆ ವ್ಯಕ್ತಿಯ ಈ ಪರಿಸ್ಥತಿಗೆ ಎನು ಕಾರಣ ಅನ್ನೋ ಕತೆ ಶುರು.
ಚಿತ್ರಮಂದಿರದಲ್ಲಿ ಬ್ಯಾಟರಿ ಬಿಡುವ ಹುಡುಗ, ಅವನಿಗೆ ನಿದ್ದೆ ಬರದೆ ಇರೋ ಇನ್ಸೋಮ್ನಿಯಾ ಅನ್ನುವ ಕಾಯಿಲೆ, ಅವನು ಅದಕ್ಕೆ ತೆಗೆದುಕೊಳ್ಳುವ ಔಷದನೇ ಲೂಸಿಯ, ಲೂಸಿಯ ಔಷದ ತೆಗೆದುಕೊಂಡು ಸುಂದರವಾದ ಕನಸುಗಳನ್ನು ಕಾಣೋಕೆ ಶುರು ಮಾಡುತ್ತಾನೆ. ಅವನು ನಿಜ ಜೀವನದಲ್ಲಿ ಅವನ ಕೈಯಲ್ಲಿ ಆಗದೆ ಇರುವ ಕೆಲಸಗಳ ಬಗ್ಗೆ ಕನಸು ಕಟ್ಟುತಾನೆ. ಅವನ್ನು ಔಷದ ತೆಗೆದುಕೊಳ್ಳದೆ ನಿದ್ದೆಗೆ ಜಾರಿದಾಗ ಕೆಟ್ಟ ಕನುಸುಗಳನ್ನು ಕಾಣುತ್ತಾನೆ. ಅ ಔಷದದ ಪರಿಣಾಮದಿಂದ ಎಲ್ಲಿ ಬೇಕೋ ಅಲ್ಲಿ ನಿದ್ದೆಗೆ ಜಾರುತ್ತನೆ. ಹೀಗೆ ನಿಜ ಜೀವನ, ಸುಂದರ ಕನಸು ಮತ್ತು ಪೋಲೀಸ್ ತನಿಖೆ ಮೂರು ಕತೆಗಳು ಒಂದರ ಪಕ್ಕ ಒಂದು ನೆಡೆಯುತ್ತಾ ಹೋಗುತ್ತದೆ. ಚಿತ್ರ ನಿಮ್ಮನ್ನು ಕೊನೆ ತನಕ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ.

ಚಿತ್ರದ ಸಂಕಲನ ಅದ್ಬುತ. ಈ ತರಹದ ನಿರೂಪಣೆ ಮೊದಲ ಬಾರಿಗೆ ಕನ್ನಡಲ್ಲಿ ಮೂಡಿ ಬಂದಿದೆ. ಉಪೇಂದ್ರರವರು "A" ನಲ್ಲಿ ಇಂತ ಪ್ರಯತ್ನ ಮಾಡಿದ್ದರು. ಒಳ್ಳೆಯ ಕಥೆ ಇದೆ, ಕ್ಯಾಮರಾ ಕೆಲಸ ಮತ್ತು ಪಿಕ್ಚರ್ ಕ್ವಾಲಿಟಿ ಉತ್ತಮವಾಗಿದೆ. ನೀವು ರೋಮಾಂಚಕ ಅನುಭವ ನೀಡುವ ಕಥೆ ಇಷ್ಟಪಡುವವರಾದರೆ ,inception ಚಿತ್ರ ಇಷ್ಟ ಆಗಿದ್ದರೆ (ಈ ಚಿತ್ರ ನೋಡಿದಾಗ ಸಹ ನಾನು ಗೊಂದಲಕ್ಕೀಡು ಆಗಿರಲಿಲ್ಲ. ಲೂಸಿಯಾ ನೋಡಿದಾಗ ಗೊಂದಲಕ್ಕೀಡು ಅಗಿದ್ದು ನಿಜ ). ಲೂಸಿಯಾ ಖಂಡಿತವಾಗಿಯೂ ನಿಮಗೆ ಇಷ್ಟವಾಗುತ್ತದೆ. ಪ್ರಮುಖ ಪಾತ್ರದಲ್ಲಿ ಶ್ರುತಿ ಹರಿಹರನ್, ಹಾರ್ದಿಕಾ ಶೆಟ್ಟಿ ಮತ್ತು ನೀನಾಸಂ ಸತೀಶ್ ನಟಿಸಿದ್ದಾರೆ. ನಮ್ಮ ಹೊಸ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ಅಂತು ಬಹಳ ಚೆನ್ನಾಗಿದೆ.

ಚೆನೈ, ಪುಣೆ ಮತ್ತು ದಿಲ್ಲಿ ಹೀಗೆ ಭಾರತದಲ್ಲಿ ಹಲವು ಕಡೆ ಬಿಡುಗಡೆ ಆಗಿದೆ. ಇದು ಎಲ್ಲರು ನೋಡಬಹುದಾದ ಚಿತ್ರ. ಕನ್ನಡ ಬಾರದ ಗೆಳಯರನ್ನು ಕರೆದುಕೊಂಡು ಹೋಗಿ ಸಬ್‌ಟೈಟಲ್ ಸಹ ಇದೆ. ನಿಮಗೆ ಖಂಡಿತ ನಿರಾಸೆ ಆಗೋದಿಲ್ಲ

ಕೆಳಗಿನ ಪ್ಲೇಯರ್‍‌ನಲ್ಲಿ ಹಣ ಪಾವತಿ ಮಾಡಿ ಈ ಚಿತ್ರ ನೋಡಬಹುದು. (ನೀವು ಪಾವತಿಸಿದ ಹಣದ ಸ್ವಲ್ಪ ಭಾಗ ನನಗೂ ಸಿಗುತ್ತದೆ)



ಲೂಸಿಯ ಹಾಡುಗಳು


ನೀವು ಕೆಳಗಿನ ಹಾಡಿನ ಮೇಲೆ ಕ್ಲಿಕ್ ಮಾಡಿ ಲೂಸಿಯ ಹಾಡುಗಳನ್ನು ಮ್ಯೂಸಿಕ್ ಇಂಡಿಯಾ ಅನ್‌ಲೈನ್.ಕಾಮ್‍‍‌ನಲ್ಲಿ ಕೇಳಬಹುದು.